ಮುಂಡಗೋಡದ ಲಕ್ಕೊಳ್ಳಿ ಅರಣ್ಯ ಪ್ರದೇಶದಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪಿಸೈ ಮಂಜುನಾಥ ಗೌಡ ಅವರು ದಾಳಿ ಮಾಡಿದ್ದಾರೆ. ಈ ವೇಳೆ ನಾಲ್ವರು ಸಿಕ್ಕಿಬಿದ್ದಿದ್ದು, ಇಬ್ಬರು ಓಡಿ ಪರಾರಿಯಾಗಿದ್ದಾರೆ.
ಜೂನ್ 3ರ ಸಂಜೆ 7.30ಕ್ಕೆ ಕಾಡು ದಾರಿಯಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಫೋನ್ ಬಂದಿತು. ಪಿಸೈ ಮಂಜುನಾಥ ಗೌಡ ಅವರು ತಮ್ಮ ತಂಡದ ಜೊತೆ ಕಾಡು ಪ್ರವೇಶಿಸಿದರು. ಪೊಲೀಸರನ್ನು ಕಂಡ ಇಂದಿರಾನಗರದ ಮೇಹಬೂಬ್‌ಸಾಬ್ ಬೆಂಡಿಗೇರಿ ಹಾಗೂ ಅಬ್ದುಲ್ ಬಾಕರ್ ಕಲೆಗಾರ ಅಲ್ಲಿಂದ ಓಡಿ ಪರಾರಿಯಾದರು. ಇಂದಿರಾ ನಗರದ ಪೇಂಟಿoಗ್ ಕಾರ್ಮಿಕ ಪೈರೂಜ್‌ಖಾನ್ ಅಮಜದ್‌ಖಾನ್ ಖಾನಜಾದೆ (22), ಅಂಬೇಡ್ಕರ್ ನಗರದ ಕೂಲಿ ಕಾರ್ಮಿಕ ಸೂರಜ್ ಈರಪ್ಪ ಕೊರವರ (29), ಇಂದಿರಾ ನಗರದ ಚಾಲಕ ಶಹಬಾಜ್ ಅಹ್ಮದ್ ಮಹಮ್ಮದ್ ಹನೀಫ್ ಕಲೆಗಾರ (28) ಹಾಗೂ ಅಂಬೇಡ್ಕರ್ ನಗರದ ಉದ್ಯೋಗಿ ಅನಿಲ್ ನಾಗಪ್ಪ ಕೊರವರ (28) ಓಡಲಾಗದೇ ಸಿಕ್ಕಿಬಿದ್ದರು.
ಸಿಕ್ಕಿಬಿದ್ದ ಆ ನಾಲ್ವರನ್ನು ವಿಚಾರಣೆಗೊಳಪಡಿಸಿದ ಪೊಲೀಸರು ಓಡಿ ಹೋದವರ ಹೆಸರನ್ನು ಬಾಯ್ಬಿಡಿಸಿದರು. ಜೂಜಾಟಕ್ಕೆ ಬಳಕೆ ಮಾಡಿದ್ದ 9,310ರೂ ಹಣವನ್ನು ವಶಕ್ಕೆಪಡೆದರು. ಅಲ್ಲಿದ್ದ 52 ಇಸ್ಪಿಟ್ ಎಲೆ ಹಾಗೂ ಹಾಸಿ ಕೂತಿದ್ದ ಪ್ಲಾಸ್ಟಿಕ್ ಗೊಬ್ಬರ ಚೀಲವನ್ನು ಸಾಕ್ಷಿಗಾಗಿ ಜಪ್ತು ಮಾಡಿದರು. ಓಡಿ ಹೋದವರ ಹೆಸರನ್ನು ಸೇರಿಸಿ ಪ್ರಕರಣ ದಾಖಲಿಸಿದ್ದು, ಜೂಜಾಟ ಆಡುವವರಿಗೆ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದರು.