ಯಲ್ಲಾಪುರದ ಸೋಮಾಪುರದಲ್ಲಿರುವ ದ್ಯಾಮವ್ವ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಕಾಣಿಕೆ ಡಬ್ಬಿಯಲ್ಲಿದ್ದ 50 ಸಾವಿರ ರೂ ಕದ್ದಿದ್ದಾರೆ. ಆ ಕಳ್ಳರು ಮೂರೇ ದಿನದಲ್ಲಿ 20 ಸಾವಿರ ರೂ ಖಾಲಿ ಮಾಡಿದ್ದಾರೆ!
ಜೂನ್ 2ರಂದು ಯಲ್ಲಾಪುರದ ಸೋಮಾಪುರದಲ್ಲಿರುವ ದ್ಯಾಮವ್ವ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿತ್ತು. ದೇವಾಲಯದ ಪೂಜಾರಿ ಶ್ರೀಕಾಂತ ಅಪ್ಪಾರಾವ್ ಮಿರಾಶಿ ಅವರು ಈ ಬಗ್ಗೆ ಪೊಲೀಸ್ ದೂರು ನೀಡಿದ್ದರು. ಕಿರವತ್ತಿಯ ಹ್ಯಾಂಗ್ಯೋ ಐಸ್ ಕ್ರೀಂ ಕಂಪನಿಯಲ್ಲಿ ಕ್ಲೀನರ್ ಆಗಿರುವ, ಕಿರವತ್ತಿ ಇಸ್ಲಾಂಪುರದ ಅಬ್ದುಲ್ ಹಮೀದ್ ಸಲೀಮಸಾಬ್ ಸೋಮನಕೊಪ್ಪ ಹಾಗೂ ಕಿರವತ್ತಿ ಜಯಂತಿ ನಗರದ ಚಾಲಕ ಗೌಸ್‌ಅಲಿ ಬಾಬುಸಾಬ್ ಮಿಶ್ರಿಕೋಟಿ ಸೇರಿ ಈ ಕಾಣಿಕೆ ಹುಂಡಿ ಹೊಡೆದಿದ್ದು, ಅವರಿಬ್ಬರು ಸೇರಿ ದೇವರ ದುಡ್ಡಿನಲ್ಲಿ ಮೋಜು-ಮಸ್ತಿ ಮಾಡಿದ್ದರು.
ಕಳ್ಳತನ ಪ್ರಕರಣ ದಾಖಲಾದ ನಂತರ ಯಲ್ಲಾಪುರ ಪಿಸೈ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ, ಶೇಡಜಿ ಚೌಹಾಣ್ ಹಾಗೂ ಮಹಾವೀರ ಕಾಂಬಳೆ ಅವರು ತನಿಖೆ ಶುರು ಮಾಡಿದರು. ಎಸೈ ಶರಣಬಸವ, ದೀಪಕ ಸೋಮವಂಶಿ, ಸಿಬ್ಬಂದಿ ಉಮೇಶ ತಂಬರಗಿ, ರಾಘವೇಂದ್ರ ಮೂಳೆ ಸೇರಿ ಕಳ್ಳರಿಬ್ಬರನ್ನು ಕಂಡುಹಿಡಿದರು. ಸಂತೋಷ್ ಬಾಳೇರ್, ಬಸವರಾಜ ಡಿಕೆ, ಪರಮೇಶ್ವರ ಎಸ್ ಕೆ ಸೇರಿ ಆ ಕಳ್ಳರಿಬ್ಬರನ್ನು ಬಂಧಿಸಿದರು. ವಿಚಾರಣೆಯಲ್ಲಿ ಅವರಿಬ್ಬರು ಕಳ್ಳತನ ಮಾಡಿದನ್ನು ಒಪ್ಪಿಕೊಂಡಿದ್ದು, ಉಳಿದ 29763ರೂಪಾಯಿಯನ್ನು ಪೊಲೀಸರಿಗೆ ಒಪ್ಪಿಸಿದರು.