ಮನೆ ನಿರ್ಮಾಣ ಕೆಲಸ ಹಾಗೂ ಹಣ ಪಾವತಿ ವಿಷಯದ ವಿಚಾರವಾಗಿ ಶಿರಸಿಯಲ್ಲಿ ಹೊಡೆದಾಟ ನಡೆದಿದೆ. ಮನೆ ಮಾಲಕ ಹಾಗೂ ಕೆಲಸಗಾರರು ಪರಸ್ಪರ ಹೊಡೆದಾಡಿಕೊಂಡಿದ್ದು, ಈ ಪ್ರಕರಣ ಸದ್ಯ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಸಲಾಮತ್ ನಗರದ ತಾರಿಕ್ ಅಹಮದ್ ಸಾಬ್ ಅವರ ಮಾವ ಇಕ್ಬಾಲ್ ಫಕೀರ ಸಾಬ್ ಅವರು ಹೊಸ ಮನೆ ನಿರ್ಮಿಸುತ್ತಿದ್ದು, ಮನೆಯ ಒಳ ವಿನ್ಯಾಸ ಕೆಲಸವನ್ನು ನೆಹರು ನಗರದ ಅಬ್ರಾರ್ ಅಬ್ದುಲ್ ಶುಕೂರು ಶೇಖ್ ಹಾಗೂ ಪರ್ವೇಜ್ ಮಹಮದ್ ಅಬ್ದುಲ್ ಶುಕೂರು ಶೇಖ್ ಅವರಿಗೆ ನೀಡಿದ್ದರು. ಒಳ ವಿನ್ಯಾಸ ಕೆಲಸಕ್ಕಾಗಿ ಅಬ್ರಾರ್ ಹಾಗೂ ಪರ್ವೇಜ್ ಅವರಿಗೆ ಇಕ್ಬಾಲ್ ಅವರು ಮೊದಲೇ 30 ಲಕ್ಷ ರೂ ಹಣ ನೀಡಿದ್ದರು. ಆದರೆ, ಅವರಿಬ್ಬರು ಸರಿಯಾಗಿ ಕೆಲಸ ಮಾಡದ ಕಾರಣ ಆ ಕೆಲಸವನ್ನು ಪವಾಜ್ ಅಬ್ದುಲ್ ಶೇಖ್ ಎಂಬಾತರಿಗೆ ಹಸ್ತಾಂತರಿಸಿದ್ದರು.
ಜೂನ್ 4ರ ಸಂಜೆ ಅಬ್ರಾರ್ ಶೇಖ್ ಹಾಗೂ ಅರ್ವೇಜ್ ಈ ವಿಷಯವಾಗಿ ತಾರಿಕ್ ಅಹಮದ್ ಸಾಬ್ ಅವರ ಜೊತೆ ಜಗಳ ಮಾಡಿದರು. ಈ ವೇಳೆ ತಾರಿಕ್ ಅವರು `ಮನೆ ಕೆಲಸದ ಲೆಕ್ಕ ಕೊಡಿ’ ಎಂದು ಕೇಳಿದ್ದು, ಇದರಿಂದ ಸಿಟ್ಟಾದ ಅಬ್ರಾರ್ ಹಾಗೂ ಪರ್ವೇಜ್ ದಾಳಿ ಶುರು ಮಾಡಿದರು. ತಪ್ಪಿಸಲು ಬಂದ ಸುಹೇಲ್ ಜೈಲರ್ ಅವರಿಗೂ ಪೆಟ್ಟು ಬಿದ್ದಿತು. `ಕೆಲಸ ಮಾಡಿದ 1.80 ಲಕ್ಷ ರೂ ಬಾಕಿಯಿದ್ದು, ಈ ಬಗ್ಗೆ ಪ್ರಶ್ನಿಸಿದಾಗ ತಾರೀಖ್ ಅಹ್ಮದ್ ಸಾಬ್, ಸುಹೇಲ್ ಇಬ್ರಾಹಿಂ ಜೈಲರ್ ಹಾಗೂ ಇಕ್ಬಾಲ್ ಫಕೀರ್‌ಸಾಬ್ ಸೇರಿ ಹೊಡೆದಿದ್ದಾರೆ’ ಎಂದು ಶಿರಸಿಯ ಮುಸ್ಲಿಂ ಗಲ್ಲಿ ಹಣ್ಣಿನ ವ್ಯಾಪಾರಿ ಫಕ್ರುದ್ಧೀನ್ (ನಾಸೀರ್) ಮಹಮದ್ ಸಾಬ್ ಮೂಡಿ ಅವರು ದೂರಿದರು. ಎರಡು ಕಡೆಯವರ ಪ್ರಕರಣ ದಾಖಲಿಸಿದ ಪೊಲೀಸರು ಸತ್ಯಾಸತ್ಯತೆಯ ಬಗ್ಗೆ ಪರಿಶೀಲಿಸುತ್ತಿದ್ದಾರೆ.