ಹೊನ್ನಾವರದ ಶ್ರೀ ಮುದ್ರಿ ಶಿವಮ್ಮ ದೇವಿ ದೇವಸ್ಥಾನಕ್ಕೆ ನುಗ್ಗಿದ 10 ಜನ ಅಲ್ಲಿ ದಾಂಧಲೆ ನಡೆಸಿದ್ದಾರೆ. ದೇವಾಲಯದ ಕಾಣಿಕೆ ದುಡ್ಡು ಕದ್ದ ಅವರು ಅಲ್ಲಿದ್ದ ಕಪಾಟನ್ನು ಧ್ವಂಸ ಮಾಡಿದ್ದಾರೆ.
ದೇವರಿಗೆ ಅಪಚಾರ ಎಸಗಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮಾವಿನಕೂರ್ವಾ ಕುಲ್ಕೋಡ್ ದೇವರಕಟ್ಟೆ ಪ್ರವೀಣ ವಾಸುದೇವ ಮೇಸ್ತಾ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮುದ್ರಿ ಶಿವಮ್ಮ ದೇವಿ ದೇವಸ್ಥಾನದ ಟ್ರಸ್ಟಿಯೂ ಆಗಿರುವ ಅವರು ದೇವಾಲಯಕ್ಕೆ ನುಗ್ಗಿ ಗಲಾಟೆ ಮಾಡಿದವರ ಹೆಸರನ್ನು ಬಹಿರಂಗಪಡಿಸಿದ್ದಾರೆ.
`ದೇಗುಲದ ಆಡಳಿತ ನಿರ್ವಹಣೆಗಾಗಿ ಶ್ರೀ ಮುದ್ರಿ ಶಿವಮ್ಮ ದೇವಿ ದೇವಸ್ಥಾನ ಟ್ರಸ್ಟ್ ರಚಿಸಲಾಗಿದೆ. ದೇವರ ಚಿನ್ನ ಹಾಗೂ ಬೆಳ್ಳಿ ಆಭರಣವನ್ನು ಕೆನರಾ ಬ್ಯಾಂಕಿನ ಲಾಕರಿನಲ್ಲಿರಿಸಲಾಗಿದ್ದು, ಅದರ ಕೀ ಕೊಡಲು ಹೊನ್ನಾವರ ಪ್ರಭಾತನಗರದ ಸುರೇಶ ಲಿಂಗಾ ಮೇಸ್ತಾ ಅವರು ಒಪ್ಪುತ್ತಿಲ್ಲ. ಕೀ ಕೊಡುವಂತೆ ದುಂಬಾಲು ಬಿದ್ದ ಕಾರಣ ಸುರೇಶ ಮೇಸ್ತಾ ಅವರ ಜೊತೆ ಮೂರುಕಟ್ಟೆಯ ವೆಂಕಟೇಶ ದಾಮು ಮೇಸ್ತ, ಮಾವಿನಕೂರ್ವಾ ಕುಲ್ಕೋಡದ ಉದಯ ಲಿಂಗಾ ಮೇಸ್ತಾ, ಅದೇ ಊರಿನ ದಾಮೋದರ ಹೊನ್ನಪ್ಪ ಮೇಸ್ತ, ಆಕಾಶ ವಾಮನ ಮೇಸ್ತಾ, ರಾಧಾಕೃಷ್ಣ ದಾಮೋದರ ಮೇಸ್ತಾ, ಪುರುಷೋತ್ತಮ ನಾಗೇಶ ಮೇಸ್ತಾ, ವಿನಾಯಕ ಸುಬ್ರಾಯ ಮೇಸ್ತಾ, ವೆಂಕಟೇಶ ಉಪೇಂದ್ರ ಮೇಸ್ತಾ, ವಿಷ್ಣು ವಾಮನ ಮೇಸ್ತಾ ಸೇರಿ ದೇಗುಲಕ್ಕೆ ನುಗ್ಗಿ ಅಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ’ ಎಂದು ಅವರು ದೂರಿದ್ದಾರೆ.
`ನವೆಂಬರ್ 13ರಂದು ಈ ಎಲ್ಲರೂ ಸೇರಿ ದೇವಾಲಯಕ್ಕೆ ನುಗ್ಗಿ ಕಪಾಟು ಒಡೆದಿದ್ದಾರೆ. ಅಲ್ಲಿದ್ದ ರಸೀದಿ ಪುಸ್ತಕ. 5 ಸಾವಿರ ರೂ ಹಣ ಕದ್ದಿದ್ದಾರೆ. ಲೆಟರ್ ಪ್ಯಾಡ್, ಕಪಾಟಿನ ಕೀ ನಾಪತ್ತೆ ಮಾಡಿದ್ದಾರೆ. ದೇಗುಲದ ಹುಂಡಿ ದೋಚಿ ಪರಾರಿಯಾಗಿದ್ದಾರೆ’ ಎಂದು ಪ್ರವೀಣ ಮೇಸ್ತಾ ಅವರು ಆರೋಪಿಸಿದ್ದಾರೆ. ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಿರುವ ಪ್ರವೀಣ ಮೇಸ್ತಾ ಅವರು ಅಲ್ಲಿಂದ ಸೂಚನೆ ತಂದು ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.