ಕುಮಟಾದ ಕೃಷಿ ಉತ್ಪನ್ನ ಮಾರುಕಟ್ಟೆ ಅವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರೂ ಕ್ರಮ ಜರುಗಿಸದ ಕಾರಣ ಲೋಕಾಯುಕ್ತರಿಗೆ ದೂರು ನೀಡುವುದಾಗಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಎಚ್ಚರಿಸಿದ್ದಾರೆ.
ದೂರಿನ ಪ್ರತಿಯನ್ನು ಪ್ರದರ್ಶಿಸಿದ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಅಧಿಕಾರಿಗಳ ಅಸಡ್ಡೆ ಬಗ್ಗೆ ಆಕ್ರೋಶವ್ಯಕ್ತಪಡಿಸಿದರು. `ಎಪಿಎಂಸಿ ಆವರಣದಲ್ಲಿ ವ್ಯಾಪಕ ಪ್ರಮಾಣದಲ್ಲಿ ತ್ಯಾಜ್ಯ ಬಿದ್ದಿದೆ. ಎಲ್ಲೆಂದರಲ್ಲಿ ಬಿಯರ್ ಬಾಟಲಿಗಳು ಕಾಣಿಸುತ್ತಿವೆ. ಅಲ್ಲಿರುವ ತ್ಯಾಜ್ಯವನ್ನು ಜಾನುವಾರುಗಳು ತಿನ್ನುತ್ತಿವೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬಗ್ಗೆ ಅರಿವಿದ್ದರೂ ಅಧಿಕಾರಿಗಳು ಮೌನವಾಗಿದ್ದಾರೆ. ಸರ್ಕಾರಿ ಸಂಬಳಪಡೆದು ಸೇವೆ ಮಾಡಿದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದೂರು ನೀಡಲಾಗುತ್ತಿದೆ’ ಎಂದವರು ಮಾಹಿತಿ ನೀಡಿದ್ದಾರೆ.
`ಎಪಿಎಂಸಿ ಆವರಣದಲ್ಲಿನ ಅಶುಚಿತ್ವ ರೋಗಕ್ಕೆ ಕಾರಣವಾಗಿದೆ. ಜಾನುವಾರುಗಳು ಸಹ ಇಲ್ಲಿ ಅಸ್ವಸ್ಥವಾಗಿದ್ದು, ತ್ಯಾಜ್ಯದಿಂದ ಪರಿಸರ ಮಾಲಿನ್ಯವಾಗುತ್ತಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ, ನಿವೃತ ಸರಕಾರಿ ಅಧಿಕಾರಿ ನಾಗೇಶ್ ಹಾಗೂ ಪ್ರಮುಖರಾದ ಗಣಪತಿ ಪಟಗಾರ ಅವರು ದೂರಿದ್ದಾರೆ.