ಕಾರವಾರದ ದೇವಳಮಕ್ಕಿ ಬಳಿ ವಾಸವಾಗಿದ್ದ ನಾಗರಾಜ ಗೌಡ ಅವರು ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ರಸ್ತೆ ಪಕ್ಕದ ಹೊಂಡಕ್ಕೆ ಬಿದ್ದು ಪೆಟ್ಟು ಮಾಡಿಕೊಂಡಿದ್ದ ಅವರನ್ನು ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಿದರೂ ಬದುಕಿಸಲು ಸಾಧ್ಯವಾಗಿಲ್ಲ.
ಕಾರವಾರದ ದೇವಳಮಕ್ಕಿ ಸಮೀಪದ ಶಿರ್ವೇಯಲ್ಲಿ ನಾಗರಾಜ ಗಣೇಶ ಗೌಡ (32) ಅವರು ವಾಸವಾಗಿದ್ದರು. ಜನವರಿ 25ರ ಸಂಜೆ ಅವರು ಸೋರಗದ್ದೆಯಿಂದ ಶಿರ್ವೇ ಬೈಕ್ ಮೇಲೆ ಹೋಗುತ್ತಿದ್ದರು. ರಸ್ತೆ ತಿರುವು ಪ್ರದೇಶದಲ್ಲಿ ಅವರು ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡರು. ಬೈಕ್ ಜೊತೆ ಅವರು ರಸ್ತೆ ಪಕ್ಕದ ಹೊಂಡಕ್ಕೆ ಬಿದ್ದು ಪೆಟ್ಟು ಮಾಡಿಕೊಂಡರು.
ಎದೆ ಹಾಗೂ ತೋಳಿನ ಭಾಗಕ್ಕೆ ಗಂಭೀರ ಗಾಯ ಮಾಡಿಕೊಂಡಿದ್ದ ನಾಗರಾಜ ಗೌಡ ಅವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರನ್ನು ಬದುಕಿಸುವುದಕ್ಕಾಗಿ ನಿರಂತರ ಆರೈಕೆಯೂ ನಡೆಯಿತು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಜನವರಿ 27ರಂದು ಅವರು ಸಾವನಪ್ಪಿದ್ದು, ಸೊರಗದ್ದೆಯ ಮಾದೇವ ಗೋವಿಂದ ಗೌಡ ಅವರು ಈ ಬಗ್ಗೆ ಪೊಲೀಸರಿಗೆ ವಿಷಯ ಮುಟ್ಟಿಸಿದರು. ಮಲ್ಲಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು.