ಮೀನು ಸಾಗಾಟ ಬುಲೆರೋ ಹಾಗೂ ಪ್ರಯಾಣಿಕರನ್ನು ಹೊತ್ತೊಯ್ಯುವ ಸರ್ಕಾರಿ ಬಸ್ ನಡುವೆ ಕುಮಟಾದಲ್ಲಿ ಅಪಘಾತವಾಗಿದೆ. ಈ ಅವಘಡದಲ್ಲಿ ಏಳು ಜನರಿಗೆ ಗಾಯವಾಗಿದೆ.
ರಾಷ್ಟಿಯ ಹೆದ್ದಾರಿಯ ಮಾನೀರ ದೇವಸ್ಥಾನದ ಬಳಿ ಗುರುವಾರ ಈ ದುರಂತ ನಡೆದಿದೆ. ಕುಮಟಾ ಡಿಪೋಗೆ ಸೇರಿದ ಬಸ್ಸು ಗೋಕರ್ಣದಿಂದ ಮರಳುತ್ತಿರುವಾಗ ಕಾರವಾರದಿಂದ ಮೀನು ತಂದಿದ್ದ ಬುಲೆರೋಗೆ ಗುದ್ದಿದೆ. ಕುಮಟಾದಲ್ಲಿ ಮೀನು ಮಾರಾಟ ಮಾಡಿ ಮರಳುತ್ತಿದ್ದ ಬುಲೆರೋಗೆ ಎದುರಿನಿಂದ ಬಂದ ಬಸ್ಸು ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ವಾಹನಗಳ ಮುಂದಿನ ಭಾಗ ಜಖಂ ಆಗಿದೆ.
ಬೋಲೆರೂ ವಾಹನದ ಚಾಲಕ ಕಾರವಾರದ ಡೇವಿಡ್ ಪಾಸ್ಕಲ್ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಜೊತೆಗೆ ಬಸ್ಸಿನಲ್ಲಿದ್ದ ಆರು ಜನರಿಗೆ ನೋವಾಗಿದೆ. ಡೇವಿಡ್ ಅವರನ್ನು ಮಂಗಳೂರು ಆಸ್ಪತ್ರೆಗೆ ಕಳುಹಿಸಲಾಗಿದ್ದು, ಉಳಿದವರಿಗೆ ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಆರೈಕೆ ನಡೆದಿದೆ. ಅಪಘಾತದ ಪರಿಣಾಮ 1 ತಾಸುಗಳ ಕಾಲ ಸಂಚಾರ ದಟ್ಟಣೆ ಉಂಟಾಗಿದ್ದು, ಹೆದ್ದಾರಿ ಉದ್ದಕ್ಕೂ ವಾಹನ ನಿಂತಿರುವುದು ಕಾಣಿಸಿತು. ಪೊಲೀಸರು ಕ್ರೇನ್ ಬಳಸಿ ಅಪಘಾತಕ್ಕೀಡಾದ ವಾಹನವನ್ನು ರಸ್ತೆ ಬದಿಗೆ ಸರಿಸಿದರು.