ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ 682 ಮೊಬೈಲ್ ಫೋನುಗಳು ಕಾಣೆಯಾಗಿದೆ. ಈ ಪೈಕಿ 157 ಮೊಬೈಲ್ ಫೋನುಗಳನ್ನು ಪೊಲೀಸರು ಹುಡುಕಿದ್ದು, ಮಾಲಕರಿಗೆ ಒಪ್ಪಿಸಿದ್ದಾರೆ.
ಕಳೆದು ಹೋದ ಮೊಬೈಲ್ ಫೋನ್ ಪತ್ತೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಸಿಎಐರ್ ಎಂಬ ಪೋರ್ಟಲ್ ಸ್ಥಾಪಿಸಿದೆ. ಮೊಬೈಲ್ ಫೋನ್ ಕಳೆದುಕೊಂಡವರು ಅಲ್ಲಿ ದೂರು ನೀಡಿದರೆ ಪೊಲೀಸರು ಆ ಫೋನ್ ಹುಡುಕುವ ಕೆಲಸ ಶುರು ಮಾಡುತ್ತಾರೆ. ಕಳೆದ ಫೋನ್’ನ ಐಎಂಇಐ ಸಂಖ್ಯೆಯನ್ನು ಬ್ಲಾಕ್ ಮಾಡಿ, ಫೋನ್ ದುರುಪಯೋಗ ಆಗದಂತೆ ತಡೆಯುತ್ತಾರೆ. ಮೊಬೈಲ್ ಫೋನ್ ಕಳೆದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದರೂ ಸಹ ಈ ಪೋರ್ಟಲ್ ಮೂಲಕ ದೂರು ದಾಖಲಿಸುವುದು ಅನುಕೂಲ.
ಈ ವೆಬ್ ಪೊರ್ಟಲ್ ಮೂಲಕ ದೂರು ದಾಖಲಿಸಿದರೆ ಕಳೆದು ಹೋದ ಮೊಬೈಲ್ ದೇಶದ ಯಾವ ಭಾಗದಲ್ಲಿದ್ದರೂ ಅದರ ಮಾಹಿತಿ ಸಿಗುತ್ತದೆ. ಅದೇ ಆಧಾರದಲ್ಲಿ ಪೊಲೀಸರು ಆ ಮೊಬೈಲನ್ನು ಹುಡುಕುತ್ತಾರೆ. ಮೊಬೈಲ್ ಕಳ್ಳರಿಗೆ ಈ ಫೋರ್ಟಲ್ ಸಮಸ್ಯೆ ತಂದಿದ್ದು, ಸಿಕ್ಕಿದ ಮೊಬೈಲ್’ನ್ನು ಕಿಸೆಯೊಳಗೆ ಹಾಕಿಕೊಳ್ಳುವವರಿಗೂ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಕಳೆದ ಆರು ತಿಂಗಳಿನಿAದ ಉತ್ತರ ಕನ್ನಡ ಪೊಲೀಸರು ಸಹ ಕಳೆದ ಮೊಬೈಲ್ ಪತ್ತೆಗಾಗಿ ವಿಶೇಷ ಅಭಿಯಾನ ನಡೆಸಿದ್ದು, 157 ಮೊಬೈಲ್ ಹುಡುಕಿದ್ದಾರೆ.
ಈ ಅವಧಿಯಲ್ಲಿ ಒಟ್ಟು 682 ಮೊಬೈಲ್ ಕಾಣೆಯಾದ ಬಗ್ಗೆ ಪೊಲೀಸರಿಗೆ ದೂರು ಬಂದಿದೆ. 22 ಪೊಲೀಸ್ ಠಾಣೆಗಳ ಮೂಲಕ ಆ ದೂರು ಸ್ವೀಕರಿಸಿದ ಪೊಲೀಸರು ಅದರ ಹುಡುಕಾಟ ನಡೆಸಿದ್ದಾರೆ. ಈ ವೇಳೆ 157 ಮೊಬೈಲ್ ಸಿಕ್ಕಿದ್ದು, ಅದನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ. ಇನ್ನೂ 525 ಮೊಬೈಲುಗಳ ಹುಡುಕಾಟ ಮುಂದುವರೆದಿದೆ.