ಹಳಿಯಾಳದ ICICI ಬ್ಯಾಂಕಿನವರು ನಕಲಿ ಬಂಗಾರಕ್ಕೂ ಲಕ್ಷಾಂತರ ರೂ ಸಾಲ ಕೊಟ್ಟಿದ್ದಾರೆ. ಸಾಲಪಡೆದವರು ಬ್ಯಾಂಕಿನವರಿಗೆ ಸಿಗದೇ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ.
ಹಳಿಯಾಳದ ಯಲ್ಲಾಪುರ ನಾಕಾ ರಸ್ತೆಯಲ್ಲಿ ಐಸಿಐಸಿಐ ಬ್ಯಾಂಕ್ ಶಾಖೆಯಿದೆ. ಇಲ್ಲಿ ಜನಗಾದ ಗುಂಡು ನಾಗೇಂದ್ರ ಕಾಕತೀಕರ್ ಅವರು ಮ್ಯಾನೇಜರ್ ಆಗಿದ್ದಾರೆ. ಸಿದ್ದರಾಮೇಶ್ವರಗಲ್ಲಿಯ ಅಮರನಾಥ ರಾಮು ವಡ್ಡರ್ ಹಾಗೂ ಜೋಗಿನಕೊಪ್ಪದ ನಿಸಾರ ಅಹಮದ್ ಸರ್ಕಾವಸ್ ಸೇರಿ ಬ್ಯಾಂಕ್ ಮ್ಯಾನೇಜರ್ ಗುಂಡು ಕಾಕತೀಕರ್ ಅವರನ್ನು ಯಾಮಾರಿಸಿದ್ದಾರೆ. ಅವರಿಬ್ಬರು ಸಂಚು ರೂಪಿಸಿ ಬ್ಯಾಂಕಿಗೆ ನಕಲಿ ಬಂಗಾರ ನೀಡಿದ್ದಾರೆ. ಆ ಮೂಲಕ 355800ರೂ ಸಾಲಪಡೆದಿದ್ದಾರೆ.
ಮೊದಲು ಸಿದ್ದರಾಮೇಶ್ವರಗಲ್ಲಿಯ ಅಮರನಾಥ ವಡ್ಡರ್ ಅವರು ಸಾಲಕ್ಕಾಗಿ ಬ್ಯಾಂಕಿಗೆ ಅರ್ಜಿ ಸಲ್ಲಿಸಿದ್ದಾರೆ. ಜೋಗಿನಕೊಪ್ಪದ ನಿಸಾರ ಅಹಮದ್ ಸರ್ಕಾವಸ್ ಅವರು ಆ ಬ್ಯಾಂಕಿನಲ್ಲಿ ಬಂಗಾರ ಪರೀಕ್ಷಕರಾಗಿದ್ದು, ನಕಲಿ ಬಂಗಾರವನ್ನು ಅಸಲಿ ಎಂದು ಅವರು ದೃಢಪಡಿಸಿದ್ದಾರೆ. ಅದದ ನಂತರ ಬ್ಯಾಂಕಿನವರು 73 ಗ್ರಾಂ ಚಿನ್ನದಂಥ ವಸ್ತುಪಡೆದು ಸಾಲ ಮಂಜೂರಿ ಮಾಡಿದ್ದಾರೆ. 2025ರ ಅಗಸ್ಟ 28ಕ್ಕೆ 355800ರೂ ಸಾಲ ವಿತರಣೆಯಾಗಿದೆ.
ಅದಾದ ನಂತರ ಆ ಚಿನ್ನದ ಮೇಲೆ ಬ್ಯಾಂಕ್ ಮ್ಯಾನೇಜರ್ ಗುಂಡು ಕಾಕತೀಕರ್ ಅವರಿಗೆ ಅನುಮಾನ ಮೂಡಿದೆ. ಚಿನ್ನ ತಪಾಸಣೆ ನಡೆಸಿದಾಗ ಅದು ನಕಲಿ ಎಂದು ಗೊತ್ತಾಗಿದೆ. ಈ ಹಿನ್ನಲೆ ಗುಂಡು ಕಾಕತೀಕರ್ ಅವರು ಪೊಲೀಸ್ ದೂರು ನೀಡಿದ್ದಾರೆ.