ಕುಮಟಾ ಗಂಗೆಕೊಳ್ಳದ ಮಂಜುನಾಥ ಗೌಡ ಅವರು ಅಂಗವಿಕಲರಾದರೂ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದು, ಸದ್ಯ ಅವರ ಅಂಗಡಿಗೆ ಸಿಡಿಲು ಬಡಿದಿದೆ. ಉರಿದ ಬೆಂಕಿ ಜ್ವಾಲೆಗೆ ಮಂಜುನಾಥ ಗೌಡ ಅವರ ಕೃತಕ ಕಾಲು ಕರಕಲಾಗಿದೆ.
ಕುಮಟಾದ ಗಂಗೆಕೊಳ್ಳದಲ್ಲಿ ಮಂಜುನಾಥ ಪರಮೇಶ್ವರ ಗೌಡ ಅವರು ವಾಸವಾಗಿದ್ದರು. ಉತ್ಸಾಹಿ ಕೃಷಿಕರಾಗಿದ್ದ ಅವರು ಉಳುಮೆ ಮಾಡುವ ವೇಳೆ ಅವಘಡಕ್ಕೆ ಸಿಲುಕಿ ಕಾಲು ಕಳೆದುಕೊಂಡಿದ್ದರು. ಅದಾದ ನಂತರ ಕೃತಕ ಕಾಲು ಜೋಡಿಸಿಕೊಂಡು ಅವರು ಓಡಾಡುವುದನ್ನು ರೂಢಿಸಿಕೊಂಡಿದ್ದರು. ಕೃಷಿ ಕೆಲಸ ಸಾಧ್ಯವಾಗದ ಕಾರಣ ಮನೆ ಬಳಿಯೇ ಗೂಡಂಗಡಿ ನಿರ್ಮಿಸಿಕೊಂಡಿದ್ದರು. ಅಲ್ಲಿ ಚಹಾ-ಕುರುಕಲು ತಿಂಡಿ ಮಾರಾಟದ ಮೂಲಕ ಬದುಕು ಕಟ್ಟಿಕೊಂಡಿದ್ದರು. ದೊಡ್ಡ ಪ್ರಮಾಣದ ವ್ಯಾಪಾರ ಇಲ್ಲದಿದ್ದರೂ ಅವರ ಜೀವನ ನಡೆಯುವಷ್ಟರ ಮಟ್ಟಿಗೆ ಅಲ್ಲಿ ವಹೀವಾಟು ನಡೆಯುತ್ತಿದ್ದು, ಸದ್ಯ ಅದಕ್ಕೂ ಕೊಳ್ಳಿ ಬಿದ್ದಿದೆ.
ಬುಧವಾರ ರಾತ್ರಿ ಮಂಜುನಾಥ ಗೌಡ ಅವರ ಗೂಡಂಗಡಿಗೆ ಸಿಡಿಲು ಬಡಿದಿದೆ. ಅದರ ಪರಿಣಾಮ ಅಂಗಡಿಗೆ ಬೆಂಕಿ ತಗುಲಿದ್ದು, ಸಾಮಗ್ರಿಗಳೆಲ್ಲವೂ ಸುಟ್ಟು ಕರಕಲಾಗಿದೆ. ಅಂಗಡಿ ಪಕ್ಕವೇ ವಾಸಿಸುತ್ತಿದ್ದ ಗೌಡರು ಬೆಂಕಿ ನೋಡಿ ದೂರ ಓಡುವ ಪ್ರಯತ್ನ ಮಾಡಿದ್ದಾರೆ. ಆದರೆ, ಅವರ ಕಾಲಿಗೆ ಬೆಂಕಿ ತಗುಲಿ ಅದು ಕೃತಕವಾಗಿ ಜೋಡಿಸಿಕೊಂಡಿದ್ದ ಕಾಲು ಸುಟ್ಟು ಬೂದಿಯಾಗಿದೆ. ಅದಾಗಿಯೂ, ಅವರು ಅಲ್ಲಿಂದ ಹೊರಬಿದ್ದು ಜೀವ ಉಳಿಸಿಕೊಂಡಿದ್ದಾರೆ. ಮೂರು ಲಕ್ಷ ರೂ ಖರ್ಚು ಮಾಡಿ ಜೋಡಿಸಿಕೊಂಡಿದ್ದ ಕೃತಕ ಕಾಲು ಸುಟ್ಟಿದ್ದರಿಂದ ಮಂಜುನಾಥ ಗೌಡ ಅವರು ಅತಂತ್ರರಾಗಿದ್ದಾರೆ. ಈ ದುರಂತದಿAದ ಅವರ ಬದುಕು ಬೀದಿಗೆ ಬಿದ್ದಿದೆ.
`ಬುಧವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ಜೋರು ಗುಡುಗು ಇತ್ತು. ಆ ವೇಳೆ ಒಮ್ಮೆಲೆ ಸಿಡಿಲು ಅಬ್ಬರಿಸಿ ಅಂಗಡಿಗೆ ಬೆಂಕಿ ತಗುಲಿತು’ ಎಂದು ಅಲ್ಲಿದ್ದವರು ವಿವರಿಸಿದ್ದಾರೆ. ಅಧಿಕಾರಿಗಳು ಭೇಟಿ ನೀಡಿದ್ದು, ವಿದ್ಯುತ್ ಅವಘಡ ಎಂದು ವರದಿ ಒಪ್ಪಿಸಿದ್ದಾರೆ. `ಶಾರ್ಟ ಸರ್ಕೀಟ್ ಆಗಿದ್ದರೆ ವಿದ್ಯುತ್ ಮೀಟರ್ ಸುಡಬೇಕಿತ್ತು. ಇದು ಸಿಡಿಲ ಆಘಾತ’ ಎಂದು ಅಲ್ಲಿದ್ದವರು ಹೇಳಿದ್ದಾರೆ.