`70 ವರ್ಷವಾದರೂ ಮದುವೆ ಆಗಿಲ್ಲ. ಮಕ್ಕಳು ಆಗಿಲ್ಲ’ ಎಂಬ ಕಾರಣಕ್ಕೆ ಯಲ್ಲಾಪುರದ ರಾಮಕೃಷ್ಣ ನಾಯ್ಕ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆನಗೋಡು ಗ್ರಾಮದ ಕೊಂಬೆಮನೆ ಅರಣ್ಯ ಪ್ರದೇಶದಲ್ಲಿ ಅವರು ನೇಣು ಹಾಕಿಕೊಂಡು ಸಾವನಪ್ಪಿದ್ದಾರೆ.
ರಾಮಕೃಷ್ಣ ವಿಠ್ಠೋಬಾ ನಾಯ್ಕ ಅವರು ಯಲ್ಲಾಪುರದ ಮದನೂರಿನ ಮಾದೇವಕೊಪ್ಪದಲ್ಲಿ ವಾಸವಾಗಿದ್ದರು. ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ಅವರು ತಮ್ಮ 25ನೇ ವಯಸ್ಸಿನಲ್ಲಿಯೇ ಮದುವೆಯ ಕನಸು ಕಂಡಿದ್ದರು. ಪ್ರಾಯದ ಕಾಲದಿಂದಲೂ ಅವರು ಮದುವೆಗಾಗಿ ಕನ್ಯೆ ಹುಡುಕುತ್ತಿದ್ದರು. ಆದರೆ, ಅವರಿಗೆ ಸರಿ ಹೊಂದುವ ಹುಡುಗಿ ಮಾತ್ರ ಸಿಕ್ಕಿರಲಿಲ್ಲ.
`ತಮಗೆ ಮದುವೆ ಆಗಿಲ್ಲ. ಮಕ್ಕಳು ಇಲ್ಲ’ ಎಂದು ರಾಮಕೃಷ್ಣ ನಾಯ್ಕ ಅವರು ಸಾಕಷ್ಟು ನೊಂದಿದ್ದರು. ಸದ್ಯ ಹುತ್ಕಂಡ ಕ್ರಾಸಿನ ಬಳಿ ವಾಸವಾಗಿರುವ ಮಾದೇವಕೊಪ್ಪದ ಚಾಲಕ ರವಿ ಪ್ರಭಾಕರ ನಾಯ್ಕ ಅವರ ಬಳಿಯೂ ತಮ್ಮ ನೋವು ಹೇಳಿಕೊಂಡಿದ್ದರು. ಹೀಗಿರುವಾಗ, ಜುಲೈ 10ರಂದು ಮನೆಯಿಂದ ಕಾಣೆಯಾದ ರಾಮಕೃಷ್ಣ ನಾಯ್ಕ ಅವರು ಜುಲೈ 14ರಂದು ಶವವಾಗಿದ್ದರು. ಆನಗೋಡಿನ ಕೊಂಬೆಮನೆ ಬಸ್ ನಿಲ್ದಾಣದ ಬಳಿಯ ಅರಣ್ಯ ಪ್ರದೇಶದಲ್ಲಿ ಅವರು ನೇಣು ಹಾಕಿಕೊಂಡಿದ್ದರು.
ಕಾಡಿನ ಗಿಡಕ್ಕೆ ಶವ ನೇತಾಡುವುದನ್ನು ನೋಡಿದ ಜನ ಪೊಲೀಸರಿಗೆ ಫೋನ್ ಮಾಡಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದರು. ರವಿ ನಾಯ್ಕ ಅವರು ಸ್ಥಳಕ್ಕೆ ಆಗಮಿಸಿ, `ಮದುವೆ ಆಗದ ನೋವಿನಲ್ಲಿಯೇ ರಾಮಕೃಷ್ಣ ನಾಯ್ಕ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ’ ಎಂಬ ವಿಷಯ ತಿಳಿಸಿದರು. ಅದನ್ನೇ ಪೊಲೀಸರು ಪ್ರಕರಣದಲ್ಲಿ ದಾಖಲಿಸಿದರು.