ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಕದ್ರಾ ಅಣೆಕಟ್ಟಿನಿಂದ ಬಿಡುಗಡೆ ಯಾದ ನೀರನ್ನು ಕಾರವಾರ ಜನರಿಗೆ ಕುಡಿಯಲು ಪೂರೈಸುವ ಯೋಜನೆಗೆ ವಿರೋಧವ್ಯಕ್ತವಾಗಿದೆ. ಜಲಜೀವನ್ ಯೋಜನೆ ಅಡಿ ಈ ನೀರು ಪೂರೈಕೆ ತಯಾರಿ ನಡೆದಿದ್ದು, ಅದಕ್ಕೆ ನ್ಯಾಯವಾದಿ ಕೆ ಆರ್ ದೇಸಾಯಿ ಅವರು ತಕರಾರು ಸಲ್ಲಿಸಿದ್ದಾರೆ.
Advertisement. Scroll to continue reading.
`ಕೈಗಾ ಅಣುಸ್ಥಾವರದ ಬಳಕೆಯೊಂದಿಗೆ ವಿಕಿರಣಶೀಲ ಅಂಶ ಹೊಂದಿರುವ ಕದ್ರಾ ಜಲಾಶಯದ ನೀರನ್ನು ಶುದ್ಧೀಕರಿಸಿ, ಜನರಿಗೆ ಕುಡಿಯುವ ನೀರಾಗಿ ಪೂರೈಸುವ ಯೋಜನೆ ಸರಿಯಲ್ಲ’ ಎಂದವರು ಹೇಳಿದ್ದಾರೆ. ಈ ನೀರಿನ ಬದಲಿಗೆ ಕೊಡಸಳ್ಳಿ ಜಲಾಶಯದಿಂದ ನೀರು ಪೂರೈಸುವಂತೆ ಆಗ್ರಹಿಸಿದ್ದಾರೆ. `ಕದ್ರಾ ಅಣೆಕಟ್ಟಿನ ನೀರನ್ನು ಕೈಗಾ ಅಣುಸ್ಥಾವರದ ಶೀತಲೀಕರಣ ವ್ಯವಸ್ಥೆಗೆ ಬಳಸಲಾಗುತ್ತಿದ್ದು, ಬಳಿಕ ಅದೇ ಜಲಾಶಯಕ್ಕೆ ನೀರು ಸೇರುತ್ತದೆ. ಹೀಗಾಗಿ ಈ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸುವ ಮುನ್ನ ಅದರ ಸುರಕ್ಷತೆ ಹಾಗೂ ಗುಣಮಟ್ಟದ ಬಗ್ಗೆ ಸಮಗ್ರ ವೈಜ್ಞಾನಿಕ ಪರಿಶೀಲನೆ ನಡೆಸಬೇಕಿದೆ’ ಎಂದವರು ಆಗ್ರಹಿಸಿದ್ದಾರೆ.
Advertisement. Scroll to continue reading.
`ಕದ್ರಾ ನೀರನ್ನು ಶುದ್ಧೀಕರಿಸಿ ಕುಡಿಯಲು ಬಳಸಲಾಗುವುದು ಎಂದು ಜಲಜೀವನ್ ಮಿಷನ್ ವತಿಯಿಂದ ಹೇಳಲಾಗುತ್ತಿದೆ. ಆದರೆ, ನೀರಿನಲ್ಲಿ ವಿಕಿರಣಶೀಲ ಅಂಶಗಳಿರುವ ಸಾಧ್ಯತೆ ಇದ್ದರೆ ಸಾಮಾನ್ಯ ಶುದ್ಧೀಕರಣ ವ್ಯವಸ್ಥೆಯಿಂದ ಅವುಗಳನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವೇ? ಎಂದವರು ಪ್ರಶ್ನಿಸಿದ್ದಾರೆ. `ಅಣುಸ್ಥಾವರದ ಚಟುವಟಿಕೆಗಳಿಂದ ಕದ್ರಾ ಜಲಾಶಯದ ನೀರಿನ ಮೇಲೆ ಯಾವುದೇ ಪರಿಣಾಮ ಉಂಟಾಗದoತೆ ನಿರಂತರ ಮೇಲ್ವಿಚಾರಣೆ ನಡೆಸುವ ವ್ಯವಸ್ಥೆ ಯಾರು ನೋಡಿಕೊಳ್ಳುತ್ತಾರೆ ಎಂಬುದಕ್ಕೂ ಉತ್ತರ ಬೇಕಿದೆ. ನೀರಿನ ಗುಣಮಟ್ಟ, ವಿಕಿರಣ ಪ್ರಮಾಣ ಹಾಗೂ ಉಷ್ಣಾಂಶವನ್ನು ನಿಯಮಿತವಾಗಿ ಪರಿಶೀಲಿಸುವ ಸ್ವತಂತ್ರ ವ್ಯವಸ್ಥೆ ಇರಬೇಕು’ ಎಂದವರು ಹೇಳಿದ್ದಾರೆ.
`ಪರಿಸರ ಅನುಮತಿ ಹಾಗೂ ಸಂಬAಧಿತ ವರದಿಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಅರಣ್ಯ ಇಲಾಖೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಸಂಬAಧಿತ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಬೇಕು’ ಎಂದವರು ಒತ್ತಾಯಿಸಿದ್ದಾರೆ. `ಕದ್ರಾ ನೀರಿನ ಬದಲಿಗೆ ಕೊಡಸಳ್ಳಿ ಜಲಾಶಯದಿಂದ ಕಾರವಾರ ತಾಲೂಕಿನ ಜನರಿಗೆ ಕುಡಿಯುವ ನೀರು ಪೂರೈಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಕೊಡಸಳ್ಳಿ ನೀರು ಪೂರೈಕೆಗಾಗಿ ಅಗತ್ಯವಿರುವ ಜಾಗವನ್ನು ನೀಡಲು ಸ್ಥಳೀಯರು ಸಿದ್ಧರಿದ್ದು, ಅಗತ್ಯವಿದ್ದಲ್ಲಿ ಬಾವಿ ನಿರ್ಮಿಸಿ ನೀರು ಸರಬರಾಜು ಮಾಡುವಂತೆ ಮನವಿ ಮಾಡಲಾಗಿದೆ’ ಎಂದವರು ಹೇಳಿದ್ದಾರೆ.
`ಕದ್ರಾ ನೀರಿನ ಕುರಿತು ವೈಜ್ಞಾನಿಕ ಹಾಗೂ ಪರಿಸರ ಸಂಬAಧಿತ ಅಂಶಗಳನ್ನು ಸಂಪೂರ್ಣವಾಗಿ ಪರಿಶೀಲಿಸದೆ ಯೋಜನೆ ಜಾರಿಗೊಳಿಸಬಾರದು. ಜನರ ಆರೋಗ್ಯ ಮತ್ತು ಸುರಕ್ಷತೆಗೆ ಯಾವುದೇ ರೀತಿಯ ಅಪಾಯ ಎದುರಾಗದಂತೆ ಪರ್ಯಾಯ ಕುಡಿಯುವ ನೀರಿನ ಮೂಲವನ್ನು ಒದಗಿಸಬೇಕು’ ಎಂದು ಅವರು ಆಗ್ರಹಿಸಿದರು. ಸನಾತನ ಸ್ವರಾಜ್ಯ ಸಂಘ ಅಧ್ಯಕ್ಷ ವಿನಾಯಕ ಸಾವಂತ, ಗುರು ಸಾವಂತ, ವಾಮನ ನಾಗೇಕರ್ ಹಾಗೂ ಅಶೋಕ ರಾಣೆ ಅವರು ಕೆ ಆರ್ ದೇಸಾಯಿ ಅವರ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.