ಕೂಲಿ ಕಾರ್ಮಿಕರ ಜೊತೆ ಸದಾ ಸಿಡಿಮಿಡಿಯಾಗಿರುತ್ತಿದ್ದ ಗುಳ್ಳಾಪುರದ ಸುಬ್ರಹ್ಮಣ್ಯ ಗಾಂವ್ಕರ್ ಅವರು ದುಡಿದ ಹಣ ಕೇಳಿದ ನಾಗರಾಜ ಬಾಂದೇಕರ್ ಅವರ ತಲೆಗೆ ಗುರಿಯಿಟ್ಟು ಗುಂಡು ಹೊಡೆದಿದ್ದಾರೆ. ಈ ವೇಳೆ ನಾಗರಾಜ ಬಾಂದೇಕರ್ ಅವರು ಕೈ ಅಡ್ಡ ಹಿಡಿದಿದ್ದರಿಂದ ಆ ಗುಂಡು ಅವರ ಅಂಗೈ ಸೀಳಿ ಮುಂದೆ ಹೋಗಿದೆ.
ಯಲ್ಲಾಪುರದ ಗುಳ್ಳಾಪುರದಲ್ಲಿ ಸುಬ್ರಹ್ಮಣ್ಯ ಮಹಾದೇವ ಗಾಂವ್ಕರ್ ಅವರು ವಾಸವಾಗಿದ್ದಾರೆ. 41 ವರ್ಷದ ಅವರು ಅಡಿಕೆ ತೋಟ ನಿರ್ಮಿಸಿದ್ದು, ಅದರ ಆದಾಯದಿಂದ ಜೀವನ ನಡೆಸುತ್ತಿದ್ದಾರೆ. ತಮ್ಮ ತೋಟದ ಕೆಲಸಕ್ಕೆ ಅನುಕೂಲ ಆಗುವ ಹಾಗೇ ಅವರು ಆಗಾಗ ಕೂಲಿ ಕಾರ್ಮಿಕರನ್ನು ನೇಮಿಸುತ್ತಾರೆ. ಆದರೆ, ಕೂಲಿ ಕಾರ್ಮಿಕರನ್ನು ಅವರು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಸದಾ ಸಿಡುಕು ಸ್ವಭಾವದ ಸುಬ್ರಹ್ಮಣ್ಯ ಗಾಂವ್ಕರ್ ಅವರು ಕೂಲಿ ಕಾರ್ಮಿಕರ ಜೊತೆಯೂ ಅದೇ ರೀತಿ ವರ್ತಿಸಿದ್ದು, ಸದ್ಯ ಕೂಲಿ ಹಣ ಕೇಳಿದ ಗುಳ್ಳಾಪುರದ ನಾಗರಾಜ ಮನೋಹರ ಬಾಂದೇಕರ್ ಅವರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ.
ನಾಗರಾಜ ಬಾಂದೇಕರ್ ಅವರು ಮೂರು ತಿಂಗಳ ಹಿಂದೆ ಸುಬ್ರಹ್ಮಣ್ಯ ಗಾಂವ್ಕರ್ ಅವರ ತೋಟಕ್ಕೆ ಹೋಗಿ ಕೆಲಸ ಮಾಡಿದ್ದರು. ಆದರೆ, ಆ ವೇಳೆ ಸುಬ್ರಹ್ಮಣ್ಯ ಗಾಂವ್ಕರ್ ಅವರು ಕೂಲಿ ಹಣ ಪಾವತಿ ಮಾಡಿರಲಿಲ್ಲ. ನವೆಂಬರ್ 28ರ ಮಧ್ಯಾಹ್ನ ನಾಗರಾಜ ಬಾಂದೇಕರ್ ಅವರಿಗೆ ಹಣದ ಅವಷ್ಯಕತೆ ಎದುರಾಗಿದ್ದು, ಸುಬ್ರಹ್ಮಣ್ಯ ಗಾಂವ್ಕರ್ ಅವರ ಮನೆಗೆ ಹೋಗಿ ಹಣ ಕೇಳಿದರು. ಈ ವೇಳೆ ಸಿಟ್ಟಾದ ಸುಬ್ರಹ್ಮಣ್ಯ ಗಾಂವ್ಕರ್ ಅವರು `ಆ ದಿನ ನೀನು ಸರಿಯಾಗಿ ಕೆಲಸ ಮಾಡಿಲ್ಲ. ನಿನ್ನ ಹಣ ಕೊಡುವುದಿಲ್ಲ’ ಎಂದು ಕಠೋರವಾಗಿ ಹೇಳಿದರು. ಅದಾಗಿಯೂ, ನಾಗರಾಜ ಬಾಂದೇಕರ್ ಅವರು ಅಲ್ಲಿಯೇ ನಿಂತಿದ್ದು, ಇದರಿಂದ ಇನ್ನಷ್ಟು ಕೆರಳಿದ ಸುಬ್ರಹ್ಮಣ್ಯ ಗಾಂವ್ಕರ್ ಅವರು `ಬೋ.. ಮಗನೆ, ಸೂ.. ಮಗನೆ’ ಎಂದು ಬಯ್ಯಲು ಶುರು ಮಾಡಿದರು.
`ನನ್ನನ್ನು ಏಕೆ ಬಯ್ಯುವಿರಿ?’ ಎಂದು ನಾಗರಾಜ ಬಾಂದೇಕರ್ ಅವರು ಗಟ್ಟಿಯಾಗಿಯೇ ಪ್ರಶ್ನಿಸಿದರು. ಮೊದಲೇ ಸಿಟ್ಟಿನಲ್ಲಿದ್ದ ಸುಬ್ರಹ್ಮಣ್ಯ ಗಾಂವ್ಕರ್ ಅವರು ಇನ್ನಷ್ಟು ಉಗ್ರ ಸ್ವರೂಪ ಪ್ರದರ್ಶಿಸಿದ್ದು, ಮಂಗನನ್ನು ಹೊಡೆಯಲು ತಂದಿದ್ದ ಏರ್ಗನ್’ನ್ನು ನಾಗರಾಜ ಬಾಂದೇಕರ್ ಅವರ ತಲೆಗೆ ಇಟ್ಟರು. ಹಣೆಗೆ ಬಂದೂಕಿನ ನಳಕೆ ಬಂದಿರುವುದನ್ನು ಅರಿತ ನಾಗರಾಜ ಬಾಂದೇಕರ್ ಅವರು ಅಲ್ಲಿಂದ ತಪ್ಪಿಸಿಕೊಳ್ಳಲು ಕೈ ಅಡ್ಡ ಹಿಡಿದು, ದೂರ ಸರಿದರು. ಆ ವೇಳೆಗಾಗಲೇ ಸುಬ್ರಹ್ಮಣ್ಯ ಗಾಂವ್ಕರ್ ಅವರು ಟ್ರಿಗರ್ ಅದುಮಿದ್ದು, ಏರ್ಗನ್ ಗುಂಡು ನಾಗರಾಜ ಬಾಂದೇಕರ್ ಅವರ ಎಡಗೈಗೆ ತಾಗಿತು.
ಅಂಗೈ ಸೀಳಿಕೊಂಡು ಆ ಗುಂಡು ಮುಂದೆ ಹೋಗಿದ್ದು, ನಾಗರಾಜ ಬಾಂದೇಕರ್ ಅವರ ಕೈಯಿಂದ ರಕ್ತ ಚಲ್ಲೆದರೂ ಸುಬ್ರಹ್ಮಣ್ಯ ಗಾಂವ್ಕರ್ ಅವರ ಕೋಪ ಇಳಿದಿರಲಿಲ್ಲ. `ನಿನ್ನನ್ನು ಕೊಲೆ ಮಾಡದೇ ಬಿಡುವುದಿಲ್ಲ’ ಎಂದು ಸುಬ್ರಹ್ಮಣ್ಯ ಗಾಂವ್ಕರ್ ಅವರು ಅರಚುತ್ತಲೇ ಇದ್ದರು. ಜೀವ ಉಳಸಿಕೊಂಡ ನಾಗರಾಜ ಬಾಂದೇಕರ್ ಅವರು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಪಡೆದರು. ತಮ್ಮ ಮೇಲಾದ ದಾಳಿಯ ಬಗ್ಗೆ ಅವರು ಪೊಲೀಸರಿಗೆ ದೂರಿದ್ದು, ಯಲ್ಲಾಪುರ ಪಿಸೈ ರಾಜಶೇಖರ್ ವಂದಲಿ ಅವರು ಪ್ರಕರಣ ದಾಖಲಿಸಿದರು. ಸದ್ಯ ಪೊಲೀಸರು ತನಿಖೆ ನಡೆಸಿದ್ದು, ಈ ವಿಷಯದ ಸತ್ಯಾಸತ್ಯತೆಗಳ ಪರಿಶೀಲನೆ ನಡೆಯುತ್ತಿದೆ.